ಪ್ರಮಾಣ - 
ವಸ್ತುವಿನ ಯಥಾರ್ಥಜ್ಞಾನವನ್ನು ಕೊಡುವ ಸಾಧನ. ಹೊಸತಾದ ಜ್ಞಾನವನ್ನು ಕೊಡುವ ಮತ್ತು ಈಗಾಗಲೇ ಪಡೆದುಕೊಂಡಿರುವ ಜ್ಞಾನವನ್ನು ಪರೀಕ್ಷೆಗೆ ಗುರಿಪಡಿಸಲು ಸಹಾಯಕವಾದ ಸಾಧನವೂ ಹೌದು. ಭಾರತೀಯ ತತ್ತ್ವಚಿಂತನೆಯ ಎಲ್ಲ ದರ್ಶನಗಳೂ ಇದಕ್ಕೆ ಪ್ರಾಧಾನ್ಯ ಕೊಟ್ಟಿವೆ. ದರ್ಶನಗಳಲ್ಲಿ ಪ್ರಮಾಣಗಳ ಸಂಖ್ಯೆ ಅವುಗಳ ವ್ಯಾಪ್ತಿ ಮತ್ತು ಸ್ವರೂಪಗಳ ಬಗ್ಗೆ ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ವಿವಿಧ ದರ್ಶನಗಳು ಒಪ್ಪಿಕೊಳ್ಳುವ ಪ್ರಮಾಣಗಳ ಸಂಖ್ಯೆ ಈ ರೀತಿ ಇವೆ: ಚಾರ್ವಾಕ-ಪ್ರತ್ಯಕ್ಷ ಪ್ರಮಾಣ; ಬೌದ್ಧ ಮತ್ತು ವೈಶೇಷಿಕ-ಪ್ರತ್ಯಕ್ಷ ಮತ್ತು ಅನುಮಾನ; ಜೈನ, ಸಾಂಖ್ಯ, ವಿಶಿಷ್ಟಾದ್ವೈತ ಮತ್ತು ದ್ವೈತದರ್ಶನಗಳು-ಪ್ರತ್ಯಕ್ಷ, ಅನುಮಾನ ಮತ್ತು ಶಬ್ದ; ನ್ಯಾಯ-ಈ ಮೂರು ಪ್ರಮಾಣಗಳಲ್ಲದೇ ಉಪಮಾನ; ಪ್ರಾಭಾಕರ ಮೀಮಾಂಸಾ-ಈ ನಾಲ್ಕು ಪ್ರಮಾಣಗಳಲ್ಲದೇ ಅರ್ಥಾಪತ್ತಿ; ಕೌಮಾರಿಲ ಮೀಮಾಂಸಾ ಮತ್ತು ಅದ್ವೈತದರ್ಶನಗಳು-ಈ ಐದು ಪ್ರಮಾಣಗಳಲ್ಲದೇ ಅನುಪಲಬ್ಧಿ.

	(1) ಪ್ರತ್ಯಕ್ಷ; ಇಂದ್ರಿಯಗಳ ಮೂಲಕ ದೊರೆಯುವ ಜ್ಞಾನ. ಇಂದ್ರಿಯಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಿಷಯಗಳ ಸಂಪರ್ಕದಿಂದ ಉಂಟಾದ ಜ್ಞಾನವೇ ಪ್ರತ್ಯಕ್ಷ ಎಂಬುದು ಪ್ರಾಚೀನ ವ್ಯಾಖ್ಯೆ. ಅನಂತರದ ದಾರ್ಶನಿಕರೆಲ್ಲರೂ ಒಪ್ಪಿಕೊಳ್ಳುವ ವ್ಯಾಖ್ಯೆಯಿದು; ನೇರವಾಗಿ ಅಥವಾ ಅವ್ಯವಹಿತವಾಗಿ ಉಂಟಾದ ಜ್ಞಾನ.

	(2) ಅನುಮಾನ: ಹೇತುಸಾಧ್ಯಗಳಿಗೆ ಇರುವ ನಿಯತಸಂಬಂಧದ ಅರಿವಿನ ಆಧಾರದ ಮೇಲೆ ಹೇತುವಿನ ಜ್ಞಾನದ ಮೂಲಕ ಪಕ್ಷದಲ್ಲಿ ಸಾಧ್ಯದ ಅಸ್ತಿತ್ವವನ್ನು ಊಹಿಸುವ ಪ್ರಕ್ರಿಯೆ. ಉದಾ: ಹೊಗೆ ಬೆಂಕಿಗಳು ಸದಾ ಒಟ್ಟಿಗಿರುವುವೆಂಬುದನ್ನು ತಿಳಿದು ಬೆಟ್ಟದ ಮೇಲೆ ಕೇವಲ ಹೊಗೆಯನ್ನು ಕಂಡು ಅದರ ಮೂಲಕ ಅದೇ ಬೆಟ್ಟದಲ್ಲಿ ಬೆಂಕಿಯ ಅಸ್ತಿತ್ವವನ್ನು ಊಹಿಸುವುದು. ಇಲ್ಲಿ ಹೊಗೆ ಹೇತು, ಬೆಂಕಿ ಸಾಧ್ಯ ಮತ್ತು ಬೆಟ್ಟ ಪಕ್ಷ.

	(3) ಶಬ್ದ: ಪ್ರತ್ಯಕ್ಷ ಅನುಮಾನಗಳಿಂದ ಪಡೆಯಲಾಗದಂಥ ಜ್ಞಾನವನ್ನು ಕೊಡುವ ಸಾಧನ. ಈ ಪ್ರಮಾಣ ಎರಡು ವಿಧ. (ಅ) ಲೌಕಿಕಶಬ್ದ ಪ್ರಮಾಣ-ಇದು ಇತರ ಪ್ರಮಾಣಗಳಿಂದ ಪರೀಕ್ಷಿಸಬಹುದಾದ ಅನುಭವಾತ್ಮಕ ವಸ್ತುಗಳ ಜ್ಞಾನವನ್ನು ಕೊಡುವ ಸಾಧನ. ವಾಸ್ತವಾಂಶವನ್ನು ತಿಳಿದಿರುವ, ತಾನು ತಿಳಿದಂಥ ವಿಷಯವನ್ನು ನಿಷ್ಕøಷ್ಟವಾಗಿ ತಿಳಿಯಪಡಿಸುವ ವ್ಯಕ್ತಿಯೇ ಇದಕ್ಕೆ ಆಧಾರ. ಈ ಕಾರಣದಿಂದ ಇದನ್ನು ಆಪ್ತವಾಕ್ಯ ಪ್ರಮಾಣವೆಂದೂ ಕರೆಯುವರು, (ಆ) ಅಲೌಕಿಕಶಬ್ದ ಪ್ರಮಾಣ-ಇದು ಇತರ ಪ್ರಮಾಣಗಳಿಂದ ತಿಳಿಯಲಾಗದ ಅತೀಂದ್ರಿಯ ವಸ್ತುಗಳ ಜ್ಞಾನವನ್ನು ಕೊಡುವ ಸಾಧನ. ಕೆಲವು ಜೈನ ದಾರ್ಶನಿಕರು ಅತೀಂದ್ರಿಯ ವಸ್ತುಗಳ ಜ್ಞಾನವನ್ನು ಹೊಂದಿರುವ ಅನುಭಾವಿಯೆ ಇದಕ್ಕೆ ಆಧಾರವೆಂದು ಸಾರುತ್ತಾರೆ. ವೈದಿಕ ದಾರ್ಶನಿಕರ ಪ್ರಕಾರ ಶ್ರುತಿ ಅಥವಾ ವೇದವೆ ಅಲೌಕಿಕಶಬ್ದ ಪ್ರಮಾಣ. ಮೀಮಾಂಸಕರು ಈ ಪ್ರಮಾಣಕ್ಕೆ ಬಹಳ ಪ್ರಾಶಸ್ತ್ಯವಿತ್ತಿದ್ದಾರೆ.

	(4) ಉಪಮಾನ: ಪದ ಮತ್ತು ಪದಾರ್ಥಗಳ ಸಂಬಂಧದ ಜ್ಞಾನವನ್ನು ಕೊಡುವ ಸಾಧನ. ನಮಗೆ ತಿಳಿದಿಲ್ಲದ ಗವಯ ಎಂಬ ಪ್ರಾಣಿ ಹಸುವನ್ನು ಹೋಲುತ್ತದೆಂದು ಯಾರೊ ಹೇಳಿರುತ್ತಾರೆ. ಮುಂದೆ ಅರಣ್ಯದಲ್ಲಿ ಹಸುವನ್ನು ಹೋಲುವ ಒಂದು ಪ್ರಾಣಿಯನ್ನು ಕಂಡಾಗ ಹಿಂದಿನ ಹೇಳಿಕೆ ಸ್ಮøತಿಗೆ ಬಂದು ಆ ಹೇಳಿಕೆಯ ಅರ್ಥವೆ ಈ ಪ್ರಾಣಿ ಎಂಬ ಜ್ಞಾನ ಬರುತ್ತದೆ.

	(5) ಅರ್ಥಾಪತ್ತಿ: ಎರಡು ಸಂಗತಿಗಳ ನಡುವೆ ತೋರುವ ವಿರೋಧವನ್ನು ಹೋಗಲಾಡಿಸಲು ಒಂದು ಊಹಾಪ್ರತಿಜ್ಞೆಯನ್ನು ಮಾಡುತ್ತೇವೆ. ಅದನ್ನು ರಚಿಸುವ ಪ್ರಕ್ರಿಯೆಯೇ ಅರ್ಥಾಪತ್ತಿ. ಉದಾಹರಣೆಗೆ 'ಕ ಎಂಬುವರು ಬದುಕಿರುವರು, ಆದರೆ ಅವರು ಮನೆಯಲ್ಲಿಲ್ಲ-ಈ ಎರಡು ವಾಕ್ಯಗಳಿಗೆ ಇರುವ ವಿರೋಧವನ್ನು ನಾವು 'ಕ ಎಂಬುವರು ಮನೆಯಾಚೆ ಎಲ್ಲೋ ಇರಬೇಕು ಎಂದು ಊಹಿಸಿ ನಿವಾರಿಸಿಕೊಳ್ಳುತ್ತೇವೆ.

	(6) ಅನುಪಲಬ್ಧಿ: ವಸ್ತುಗಳ ಅಭಾವ ಜ್ಞಾನವನ್ನು ಕೊಡುವ ಸಾಧನ.

	ಭಾರತೀಯ ತತ್ತ್ವಶಾಸ್ತ್ರದಲ್ಲಿ ತತ್ತ್ವನಿರ್ಣಯ ಈ ಪ್ರಮಾಣಗಳನ್ನು ಅವಲಂಬಿಸಿರುವುದರಿಂದ ಭಾರತೀಯ ದರ್ಶನಗಳೆಲ್ಲ ಪ್ರಮಾಣಗಳನ್ನು ಕುರಿತು ವಿಶೇಷವಾಗಿ ಚರ್ಚಿಸುತ್ತವೆ. ಪ್ರಮಾಣಗಳನ್ನು ಯುಕ್ತ ರೀತಿಯಲ್ಲಿ ಬಳಸಲ್ಪಡದಿದ್ದಲ್ಲಿ ಪ್ರಮಾಣಾಭಾಸವಾಗುತ್ತದೆ. 				(ನೋಡಿ- ಅನುಪಲಬ್ಧಿ)
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ